ಗಝಲ್--೩
ಕಾಯ್ದ ನೊರೆಹಾಲಂತೆ ಉಕ್ಕಿದೆನ್ನ ಭಾವನೆಗಳ ಗೀತೆ ನನ್ನ ಕವನ.
ಹದವಾಗಿ, ಮೌನದೊಳು ಮಾತಾದ ಭಾವಪರವಶತೆ ನನ್ನ ಕವನ.
ರಮ್ಯ ನಿಸರ್ಗದೊಳು ನನ್ನೆ ನಾ ಮೈಮರೆತಾಗ
ಕಲ್ಪನಾಲಹರಿಯಾಗಿ ಉದ್ಭವಿಸೊ ಭವ್ಯತೆ ನನ್ನ ಕವನ.
ಪದಪ್ರಾಸಗಳು ಕಚಗುಳಿಯಿಟ್ಟು ಉತ್ಸಾಹಿಸಲು
ಮೈದಳೆದು ನಿಂತ ಭಾವಗಳ ನಾವಿನ್ಯತೆ ನನ್ನ ಕವನ.
ವಿರಹ, ಉದ್ವೇಗ,ಕೋಪತಾಪಗಳ ಹೊಯ್ದಾಟಕೆ
ಮಿಂಚಂತೆ ಪ್ರಕಟಗೊಳ್ಳುವ ರೂಪನಿಖರತೆ ನನ್ನ ಕವನ.
ಪ್ರೇಮಸಲ್ಲಾಪ, ಪರಿಣಯದಾಲಾಪ, ಹಾಸ್ಯ ಲಾಸ್ಯ
ನಿರಂತರ ತುಂಬಿ ಸೂಸುವ ನವ ರಸಿಕತೆ ನನ್ನ ಕವನ.
ಪ್ರೋತ್ಸಾಹದ ಕರತಾಡನ, ಅಭಿನಂದನೆ, ಗೌರವದಾತೆ
ತ್ರಿನೇತ್ರಜನಿಗೆ ಖ್ಯಾತಿಯ ತಂದಿತ್ತ ಭಾಗ್ಯದಾತೆ ನನ್ನ ಕವನ.
... ... ... ... ... ... ... ...
✍..ತ್ರಿನೇತ್ರಜ.
ಶಿವಕುಮಾರ.ಹಿರೇಮಠ.
No comments:
Post a Comment