Sunday, 15 April 2018



ಗಝಲ್-- ೨೭
     [05/04, 8:02 p.m.]

ಎನ್ನೆದೆಯ ಹಸಿರು ತಿಳಿಗೊಳದಲ್ಲರಳಿದ ಚಿತ್ತಾರ ನೀನು|
ಅಂದದಿಂದೆನ್ನ ಮನಸೂರೆಗೊಂಡ ಮೋಹಕ ಮಂದಾರ ನೀನು||

ಶುಭ್ರವಾಗಿಹ ನೈದಿಲೆಯಂದದಿ ಅಂದು ನೀರೊಳು ಕಂಡೆ |
ಶ್ವೇತವರ್ಣೆ ನಾನಂದು ಕಂಡ ಅಪ್ಸರೆಯ ಸಾಕಾರಚಿತ್ರ ನೀನು||

ನೀರುಂಗುರಗಳ ಮೂಡಿಸುತ ಜಲದೊಳಾಡಿದ ಕನ್ಯಾ ರೂಪಸಿ |
ಎನ್ನ ಹೃದಯದೊಳು ಸಿಹಿ ಕ್ಷೋಭೆ ತಂದಿತ್ತ ಶೃಂಗಾರವೆ ನೀನು||

ಕಣ್ಣಿನಲ್ಲೇ ಅಚ್ಚಾಗಿದೆ ಆ ನಿನ್ನ ತನ್ಮಯತೆಯ ಭಾವಭಂಗಿ|
ಮೊಗವ ತೋರದೆ ಮನಗೆದ್ದ ಮಧುರ ವೈಯ್ಯಾರ ನೀನು||

ಪಚ್ಚೆಗೊಳದ ಹಂಸಿನಿಯಾ ಹೇಗೆ ಮರೆಯುವ ಈ ತ್ರಿನೇತ್ರಜ|
ವರ್ಣಪಟವಾಗಿ ಮೂಡಿನಿಂದಿಹ ಕಲಾ ಸಂಕರವಾದೆ ನೀನು||
    ..ತ್ರಿನೇತ್ರಜ..

Sunday, 1 April 2018

*ಗಝಲ್-೨೬*

ಜಗದ ಸೊಗಸು ನೋಡುತ ನೋಡುತ ಸಂಜೆಯಾಗಿತ್ತು|
ಕಡಲ ಮಡಿಲಿಗೆ ರವಿ ಜಾರುತ ಜಾರುತ  ಸಂಜೆಯಾಗಿತ್ತು||

ಹಗಲು ನಂದಲು ಜೋಡಿಮರಗಳ ಆನಂದ ಕರಗಿ ಕಪ್ಪಿಟ್ಟಿತ್ತು|
ಬೆಸುಗೆಯ ಸಂಭ್ರಮ ಸವಿಯುತ ಸವಿಯುತ ಸಂಜೆಯಾಗಿತ್ತು||

ಸಾಗರದನ್ನವ ಹೆಕ್ಕಲು ಇನ್ನೂ ಬಲೆ ಬೀಸೋ ಧಾವಂತವಿತ್ತು|
ಅಲೆಗಳ ಜೊತೆಯಲಿ ಸೆಣಸುತ ಸೆಣಸುತ ಸಂಜೆಯಾಗಿತ್ತು||

ದಿನವೆಲ್ಲ ಮರೆತಿದ್ದ ಮಧುಪಾತ್ರೆಯ ನೆನಪು ಈಗ ಮತ್ತೆ ಕಾಡಿತ್ತು|
ಬಾಳಿಗಾಗಿ ನಾಳೆಗಾಗಿ ದುಡಿಯುತ ದುಡಿಯುತ ಸಂಜೆಯಾಗಿತ್ತು||

ಬದಲಾಗುವ ಜಗದ ರಂಗು ಇಟ್ಟ ನಂಬಿಕೆಯನ್ನೆ ಹುಸಿಯಾಗಿಸಿತ್ತು|
ಬದುಕಿನುದ್ದಕು ತ್ರಿನೇತ್ರಜನ ಹುಡುಕುತ ಹುಡುಕುತ ಸಂಜೆಯಾಗಿತ್ತು||

✍🏼  ತ್ರಿನೇತ್ರಜ

ಶಿವಕುಮಾರ. ಹಿರೇಮಠ.
ಗಝಲ್ --೨೫

ಕುದ್ದ ಬೇಸರವು ಕಣ್ಣಿಂದುಕ್ಕುವ ಮುನ್ನ ನೀ ಬಂದು ನೋಡಬಹುದಿತ್ತು
ಒಲವಿನ ಬೆಸುಗೆ ಒಡೆಯುವ ಮುನ್ನ ನೀ ಬಂದು ನೋಡಬಹುದಿತ್ತು

ಸುಳಿಗೆ ಸಿಕ್ಕ ನಾವಿನಂತೆ ನನ್ನ ಮನವು ನಿನ್ನ ಸುತ್ತಲೇ ಸುತ್ತುತ್ತಲಿತ್ತು
ನಿರಾಸೆಯೊಳಗೆ ಮುಳುಗಿಸುವ ಮುನ್ನ ನೀ ಬಂದು ನೋಡಬಹುದಿತ್ತು

ಗಾಳಕ್ಕೆ ಸಿಕ್ಕ ಗಂಗಾಫಲದಂತೆ ನಿನ್ನ ಕಪಟ ಮೋಹಕೆ ನಾ ಸಿಲಿಕಿದ್ದೆನೆ?
ದಿಟವೆಂದು ಜಗವೆಲ್ಲ ನಗುವ ಮುನ್ನ ನೀ ಬಂದು ನೋಡಬಹುದಿತ್ತು

ತಿಳಿಗೊಳದಂತಹ ಹೃದಯ ಸರೋವರದಲಿ ನಿನ್ನ ಬಿಂಬ ಮಾತ್ರವಿತ್ತು
ತಳವ ಕಲಕಿ ಕೆಸರಾಗಿಸುವ ಮುನ್ನ ನೀ ಬಂದು ನೋಡಬಹುದಿತ್ತು

ಮತ್ತೆ ಚಿಗುರುವಾಸೆ ಬಿಟ್ಟು ಕೊರಗುವ ಕೊರಡಾಗಿದ್ದ ತ್ರಿನೇತ್ರಜ
ಇವಳು ಜಲವೀಯುವ ಮುನ್ನ ನೀ ಬಂದು ನೋಡಬಹುದಿತ್ತು
:::::::::::::::::::::::::::''::::::::::::::
✍🏼 ತ್ರಿನೇತ್ರಜ

ಶಿವಕುಮಾರ ಹಿರೇಮಠ
ಗಝಲ್-೨೪
ಭೂರಿ ಸಭೆಯೊಳು ಕರ್ಣ ಭಂಗಂಬಡುತಿರಲು ಮಾತೃ ಮಮತೆಗೆ ಏನಾಗಿತ್ತು
ಮೈಗಂಟಿದ್ದ ಕವಚವ ಕಿತ್ತು ದಾನವಾಗಿ ಪಡೆದಾಗ ಶ್ರೇಷ್ಠ ಪೊಗರಿಗೆ ಏನಾಗಿತ್ತು
ಅಂಧತ್ವವ ಮುಂದುಮಾಡಿ ಜೇಷ್ಠನನು ಸಿಂಹಾಸನಕ್ಕೆ ಕಡೆಗಣಿಸಿದರು
ಪಾಂಡು ಮೃತ್ಯಾನಂತರ ರಾಜ್ಯವ ಮನ್ನಡೆಸಿದಾಗ ಆಳ್ವಿಕೆಗೆ ಏನಾಗಿತ್ತು
ಹೆತ್ತ ಕಂದನಿವನೆಂದು ಗೊತ್ತಾದಾಗಲೂ ತುಟಿ ಬಿಚ್ಚಲು ಮನಸಾಗಲಿಲ್ಲ
ದತ್ತು ಪಡೆದಾದರೂ ತಪ್ತಮನಕೆ ತೃಪ್ತಿ ನೀಡದ ಹೆತ್ತ ಕರುಳಿಗೆ ಏನಾಗಿತ್ತು
ರಣಕಂಕಣಕಟ್ಟಿ ಶಸ್ತ್ರ ಢಾಳಿಸುವಾಗ ಹುಟ್ಟ ಗುಟ್ಟನುಸುರಿದ್ದು ಸಂಚು
ಪಟ್ಟದಾಸೆ ತೋರಿ ಮಿತ್ರನ ತೊರೆಯೆಂದಾಗ ವಿವೇಚನೆಗೆ ಏನಾಗಿತ್ತು
ಜಲ ತೊರೆದ ಬಂಗಡೆಯಂತಾಗಿಸಿ ರಾಧೇಯನ ಡೇರೆಯೊಳಿಕ್ಕಿದ ಗಂಗಾಪುತ್ರ
ಯುದ್ಧವ ಗೆಲ್ಲಲಾಗದ ಎಲ್ಲ ಬಲ್ಲ ಮುತ್ತಾತನ ಕ್ಷಾತ್ರ ತೇಜಸ್ಸಿಗೆ ಏನಾಗಿತ್ತು
ಅನುಜೆಯ ಸೌಭಾಗ್ಯಕ್ಕೆ ತೊಟ್ಟ ಬಾಣ ಮರಳಿ ತೊಡದ ವಚನ ಪಡೆದಾಯ್ತು
ಹೂತ ಚಕ್ರವನೆತ್ತುತ್ತಿದ್ದ ನಿಶಸ್ತ್ರನ ಕತ್ತಿಗೆ ಶರವಿಕ್ಕಿದಾಗ ನೀತಿಗೆ ಏನಾಗಿತ್ತು
ಧರ್ಮದ ಪಥದಲೆ ನಡೆದು ಧರ್ಮ ರಕ್ಷಣೆಯಗೈಯಲಾಗದಲ್ಲಾ ತ್ರಿನೇತ್ರಜ
ನ್ಯಾಯೋಚಿತ ಹಕ್ಕಿಗೆ ಹೋರಾಡಿ ಮಡಿದ ಸುಯೋಧನನ ಅರ್ಹತೆಗೆ ಏನಾಗಿತ್ತು
.... ..... ..... .... ..... .... ...
✍ ತ್ರಿನೇತ್ರಜ್
ಶಿವಕುಮಾರ ಹಿರೇಮಠ