Tuesday, 27 February 2018

ಗಜಲ್ ೧೮
[25/02, 2:52 p.m.]
( ಶ್ರೀದೇವಿಗೆ ನುಡಿನಮನ)
    

ಬಾಲಿವುಡ್ ಬಣ್ಣದ ಗಗನ ಬೆಳಗಿದ ಚಾಂದಿನಿ ಚಲೀ ಗಯಿ
ರಸಿಕರ ಮನ ಘಾಯಲ್ ಗೊಳಿಸಿದ ಚಾಂದಿನಿ ಚಲೀ ಗಯಿ

ಇಂದ್ರಲೊಕ ಸುಂದರಿಯರ ನಾಚಿಸಿದ ರೂಪ ಕಿ ರಾಣಿ ಅವಳು
ಬೆಳ್ಳಿಪರದೆಯಲಿ ಅಮರ ಅಚ್ಚುಳಿಸಿದ ಚಾಂದಿನಿ ಚಲೀ ಗಯಿ

ನಟನೆಯಿಂದ ಕ್ಷಣ ಕ್ಷಣಂ ರೋಮಾಂಚನ ತುಂಬುತ್ತಿದ್ದ ಕಲಾವಿದೆ
ಸಿನಿಪ್ರಿಯರಿಗೆ ಮರೆಯದ ಸದ್ಮಾ ನೀಡಿದ ಚಾಂದಿನಿ ಚಲೀ ಗಯಿ

ಖುದಾಗವಾ ಹೈ ಅತಿಲೋಕ ಸುಂದರಿಯ ಅನುಪಮ ಸಾಧನೆಗೆ
ಪದ್ಮಶ್ರೀ ಪಡೆದು ಮಿ.ಇಂಡಿಯಾ ಬಾನಿಂದ ಚಾಂದಿನಿ ಚಲೀ ಗಯಿ

ಇಂಗ್ಲೀಷ್ ವಿಂಗ್ಲೀಷ್ ನಿಂದ ಮತ್ತೆ ಬೆಳಗಿದ ಮಾಮ್ ಮರೆಯಾದಳು
ಎಲ್ಲರಂತೆ ತ್ರಿನೇತ್ರಜನಿಗೆ ದುಃಖ ನೀಡಿ ಅಂದದ  ಚಾಂದಿನಿ ಚಲೀ ಗಯಿ

✍🏼.. ತ್ರಿನೇತ್ರಜ್

 ಶಿವಕುಮಾರ. ಹಿರೇಮಠ.

Saturday, 24 February 2018

ಗಜಲ್  ೧೭

ಬದುಕು ಕ್ಷಣಿಕ ಕಾಮನಬಿಲ್ಲು ಕತ್ತಲಾದಾಗ ಬಣ್ಣಗಳೆಲ್ಲ ಮಾಯ
ಎಲ್ಲ ಮುಗಿದು ಹೋದಮೇಲೆ ಮಣ್ಣಾಗುವೆ ಭೋಗವೆಲ್ಲ ಮಾಯ

ಮೊಟ್ಟೆ ಇಟ್ಟು ಮರಿಗಳ ಬೆಳೆಸಲು ಗೂಡನು ಕಟ್ಟುವವು ಹಕ್ಕಿಗಳು
ಪುಕ್ಕ ಬಲಿತು ಮರಿ ಹಾರಿ ಹೋದಮೇಲೆ ಕಂಡ ಕನಸೆಲ್ಲ ಮಾಯ

ಬಯಕೆಗಳ ಬೀಜಬಿತ್ತಿ ಪ್ರೀತಿಯ ಹೊಲದೊಳು ಹಸಿ ಹಸಿರ ಬೆಳೆದೆ
ಅಕಾಲಿಕದಲಿ ಅತಿವೃಷ್ಟಿ ಸುರಿದು ಹೋದಮೇಲೆ ಫಲವೆಲ್ಲ ಮಾಯ

ಭೋರ್ಗರೆದು ಹರಿಯುತ್ತಿದ್ದ ಹರೆಯಕೆ ಕಟ್ಟೆಕಟ್ಟಿ ಕೂಡಿಕ್ಕಬಯಸಿದೆ
ವಯದ ತಾಪಕೆ ಭಾವನೆಗಳು ಬತ್ತಿ ಹೋದಮೇಲೆ ಆಸೆಯೆಲ್ಲ ಮಾಯ

ಮಿಥ್ಯ ಮೃತ್ಯುಲೋಕದೊಳು ತ್ರಿನೇತ್ರಜ ಅಮರನೆಂದು ಮೆರೆದಾಯ್ತು
ವ್ಯಾಮೂಹವು ಅಳಿದು ಹೋದಮೇಲೆ ತುಂಬಿದ್ದ ಗರ್ವವೆಲ್ಲ ಮಾಯ

✍🏼  ತ್ರಿನೇತ್ರಜ್

 ಶಿವಕುಮಾರ. ಹಿರೇಮಠ.

Sunday, 18 February 2018

ಗಝಲ್ ೧೬
[17/02, 9:36 p.m.]

ಒಲವಿಗಿಂತ ನಿ‌ನಗೈಸಿರಿಯೆ ಇಷ್ಟವೆಂಬುದು ಗೊತ್ತಿರಲಿಲ್ಲ
ಹಣದಾಸೆಗೆ ನೀ ಎದೆ ಒಡೆಯುವೆಯೆಂದು ಗೊತ್ತಾಗಲಿಲ್ಲ

ಹೃದಯ ಗುಡಿಯಲಿ ನಿನ್ನಿರಿಸಿ ಪೂಜಿಸುತ್ತಿದ್ದೆ ಪ್ರೀತಿಯಿಂದ
ನೀನೊಂದು ಕ್ಷುದ್ರ ದೇವತೆ ಎಂಬುದ ನಾ ಅರಿತಿರಲಿಲ್ಲ

ನನ್ನ ಮನದ ಮನೆಯ ಅಂದ ಹೆಚ್ಚಿಸುವ ಪುಷ್ಪವೆಂದುಕೊಂಡೆ
ಮುಡಿಗೇರಿಸದೆ ಕಡೆಗಾಣಿಸುವ ಹೂವು ನೀನೆಂದು ಭಾವಿಸಲಿಲ್ಲ

ನಿನ್ನ ನಗೆಬಾಣದ ನೋಟಕ್ಕೆ ನಾನದೆಷ್ಟು ಹಾತೊರೆಯುತ್ತಿದ್ದೆನಲ್ಲ
ತುದಿಯಲ್ಲಿ ಕಾರ್ಕೂಟಕ ವಿಷವಂಟಿರುವುದು ತಿಳಿಯಲೇ ಇಲ್ಲ

ಹೃದಯವಂತರಿಗೇ ಮೋಸವಾಗಲು ಯಾರಿಟ್ಟಿಹ ಶಾಪವೋ ಎನೋ?
ಎದೆ ಉರಿವ ಅಗ್ಗಿಷ್ಟಿಕೆಯಾಗಿ ಹೃದಯವು ಕಪ್ಪಿಟ್ಟ ಇದ್ದಿಲಂತಾಯ್ತಲ್ಲ

ಜಗವನ್ನೆ ಎದುರಿಸುವ ಹುಮ್ಮಸ್ಸಿನ ಹರೆಯದೆದೆಗಾರಿಕೆ ನನ್ನಲ್ಲಿತ್ತು
ಪ್ರೀತಿ ಕೊಲ್ಲುವ ಪ್ರೇತದ ಸಂಗಮಾಡಿ ನಲುಗುವೆನೆಂದೆಣಿಸಿರಲಿಲ್ಲ

ಜೀವಕೊಟ್ಟವರ ಮರೆತು ಗಮನ ನಿನ್ನಲಿರಿಸಿ ಗಮ್ಯವನೇ ಮರೆತೆ
ಗೋರಿ ಸೇರಿದರೂ ನೀನಿತ್ತ ನೋವ ತ್ರಿನೇತ್ರಜ ಮರೆಯುವಂತಿಲ್ಲ

✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ.
ಗಝಲ್ - ೧೫

ಜಗದೊಳಾರಿಗೂ ಇರದ ಅಭೂತಪೂರ್ವ ಮೈಮಾಟ ನಿನ್ನದು
ನಿನ್ನಯ ಸೊಬಗನು ಆರಾಧಿಸುವ ಅಪರಿಮಿತ ಭಾಗ್ಯವು ನನ್ನದು

ಫಲಪುಷ್ಪಯುಕ್ತ ನವರಸಭರಿತ ಸಮೃದ್ಧ ಸಿರಿತೋಟ ನಿನ್ನದು
ಮೈ ಮರೆತು ವಿಹರಿಸುತ ಪುಳಕಗೊಳ್ಳುವ ಕಾಯಕವು ನನ್ನದು

ತಾರೆಗಳಿಂದಲಂಕೃತಗೊಂಡ ಆಗಸದಂತಹ ಮನಃಪಟ ನಿನ್ನದು
ಚಂದಿರನಂದದಲಿ ನಿನ್ನಯ ಮನಕೆ ತಂಪೆರೆವ ಯೋಗವು ನನ್ನದು

ಪಿಕದಿಂಚರವನೇ ನಾಚಿಸಿಬಿಡುವಂತಹ ಸುಮಧುರ ಕಂಠ ನಿನ್ನದು
ಕನಸುಗಳ ಗರಿಬಿಚ್ಚಿ ನವಿಲಿನಂದದಲಿ ನರ್ತಿಸುವ ಭಾವವು ನನ್ನದು

ಗುಲಾಬಿದಳಗಳಲಿ ಮುತ್ತುಗಳ ತೋರುವ ನಗೆ ಚೆಲ್ಲಾಟ ನಿನ್ನದು
ಎವೆಯಿಕ್ಕದೆ ಕಣ್ತುಂಬ ನಿನ್ನಂದವ ಸೆರೆ ಹಿಡಿವ ಕೌಶಲವು ನನ್ನದು

ತ್ರಿನೇತ್ರಜ ತನ್ನದೆಲ್ಲವನೂ ನಿನಗೇ ಸೋತ, ಎಂತಹ ಮಾಟ ನಿನ್ನದು!
ಎಲ್ಲ ನಿನ್ನದಾಗಲಿ ಚೆಲುವೆ,ಸಾಕು ನಿನ್ನ ಹೃದಯದ ಒಲವೆಲ್ಲವು ನನ್ನದು

✍🏼  ತ್ರಿನೇತ್ರಜ

 ಶಿವಕುಮಾರ. ಹಿರೇಮಠ.


Wednesday, 14 February 2018

ಗಝಲ್-14

[13/02, 12:58 p.m.]
ಶಿಷ್ಟಾಚಾರದ ದೀಪ್ತಿಯಾಗಿ ಜಗಕೆ ಮಾದರಿಯಾಗಿದ್ದೆ ಭಾರತ
ಭ್ರಷ್ಟಾಚಾರದ ನೃತ್ಯಕ್ಕೆ ಮಣಿದು ಸ್ವಾರ್ಥಿಗಳ ಸೊತ್ತಾದೆ ಭಾರತ

ಪರರ ದಬ್ಬಾಳಿಕೆಯಲ್ಲೂ ನಿನ್ನತನವ ಮಾರಲಿಲ್ಲ ಬಲವಾಗಿದ್ದೆ
ಸ್ವತಂತ್ರದ ಕಳೆಯಲ್ಲೂ ಸುಸಂಸ್ಕೃತಿ ಮಾಯವಾಗುತಿದೆ ಭಾರತ

ಅಭಿವೃದ್ಧಿಯ ಓಟ,ರಾಜಕೀಯದ ಹುಚ್ಚಾಟ,ಕಾಳಧನದ ಚೆಲ್ಲಾಟ
ಎಪ್ಪತ್ತಾದರೂ ದೀನ ದಲಿತರು ಬಲಿತರಾಗದ ಕ್ಷಾಮವಿದೆ ಭಾರತ

ಮನೆಯವರೊಟ್ಟಿಗೆ ಸಡಗರದಿಂದಾಚರಿಸೋ ಹಬ್ಬಗಳನಿತ್ತೆ
ಹೆತ್ತವರ ಕಣ್ತಪ್ಪಿಸಿ ಪ್ರೇಮಿಗಳ ದಿನ ಆಚರಿಸಲಾಗುತ್ತಿದೆ ಭಾರತ

ಅಂತಃಕರಣ ಮನುಷ್ಯತ್ವ ನೀತಿ ನಿಯಮಗಳ ಸ್ಪೂರ್ತಿಯಾಗಿದ್ದೆ
ನಿರ್ಲಜ್ಜ ಕಾಮಪಿಪಾಸುಗಳ ಧರ್ಮಾಂಧರ ಸಂತೆಯಾದೆ ಭಾರತ

ಬಸವ ಮೋಹನ ಭೀಮರು ಬೆಳಗಿ ದಾರಿತೋರಿ ಅಸ್ತರಾದರು
ದಾರಿಬಿಟ್ಟವರಿಗೆ ಚಿತ್ರ ಪ್ರತಿಮೆಗಳೇ ಬಂಡವಾಳವಾಗಿದೆ ಭಾರತ

ಗರುಭ್ಯೋ ನಮಃ ಎಂದು ತ್ರಿನೇತ್ರಜ ಜ್ಞಾನಕ್ಕೆ ಗಮನ ತೋರಿದ್ದ
ಅಧಿಕಾರಕ್ಕೆ ಡೊಗ್ಗುಸಲಾಮಿಕ್ಕುವವರ ಸೋಗಿಗೆ ಪೆಚ್ಚಾದೆ ಭಾರತ

✍🏼 ತ್ರಿನೇತ್ರಜ

 ಶಿವಕುಮಾರ‌. ಹಿರೇಮಠ.
 *ಗಜಲ್-13*
[12/02, 5:59 p.m.]

ನಿನ್ನ ಕಂಡಾಗ ಮೌನವಾಗಿಬಿಟ್ಟೆ ಭಯವು ಬಹಳವಿತ್ತು
ನಮ್ಮಿಬ್ಬರ ಮಧ್ಯೆ ಮಾತೇ ನಿಂತಾಗ ನೋವು ಬಹಳವಿತ್ತು

ನಿನಗೆಂದು ನೂರೊಂದು ಕನಸುಗಳ ಮಾಲೆ ಮಾಡಿದ್ದೆ
ಹಾರ ಹರಿದಾಗಲೂ ನಿನ್ನಲ್ಲಿ ನನಗೆ ಒಲವು ಬಹಳವಿತ್ತು

ಬೀಸೋ ಗಾಳಿಯಲಿ ತೇಲಿ ಬಂದ ತಂಪು ಬೇಸರ ತಂತು
ನೀನಿತ್ತ ಭಾವಗಳು ಸಾಲಲಿಲ್ಲ ಕಣೆ ಹಸಿವು ಬಹಳವಿತ್ತು

ನೀನಿಲ್ಲದೆ ಬದುಕಲಾರನೆಂದು ಮನ ಬಹಳ ಬಿಕ್ಕುತಿತ್ತು
ಬದುಕಿದೆ ಸಾಯಲಿಲ್ಲವೇ ಬಾಳುವ ಛಲವು ಬಹಳವಿತ್ತು

ತ್ರಿನೇತ್ರಜನ ಹೃದಯ ಸಿಂಹಾಸನವು ಸದಾ ಬರಿದಾಗುಳಿಯಿತು
ನೀ ಬಂದು ಅಲಂಕರಿಸಬಹುದಿತ್ತು ಅಲ್ಲಿ ಜಾಗವು ಬಹಳವಿತ್ತು

✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ.
*ಗಝಲ್-12*
[07/02, 5:49 p.m.]

ಲೆಕ್ಕವಿಲ್ಲದಷ್ಟು ಕಮರಿಗಳು ಬಂದವು ನನ್ನ ನಿನ್ನ ನಡುವೆ
ಅದೆಷ್ಟು ಬೇಗನೆ ದಿನಗಳು ಸವೆದವು ನನ್ನ ನಿನ್ನ  ನಡುವೆ

ಎಲ್ಲಿಯ ನೆಲ್ಲಿ ಎಲ್ಲಿಯ ಲವಣ ಬೆಸೆಯಿತು ಅನುಬಂಧ
ಅದೆಷ್ಟೋ ಗೋಡೆಗಳು ಮೂಡಿದವು ನನ್ನ ನಿನ್ನ  ನಡುವೆ

ಮೌನದಲ್ಲೂ ಇರುವ ವಿಷಯವದೇಕೊ ಅರ್ಥವಾಗಲಿಲ್ಲ
ಹೇಳದ ಮಾತುಗಳೆಷ್ಟೋ ಉಳಿದವು ನನ್ನ ನಿನ್ನ  ನಡುವೆ

ಬಿಸಿಲ ತಾಪಕೆ ಜಗ್ಗದ ಹಿಮಬಂಡೆಗಳೆಷ್ಟೋ ಇನ್ನೂ ಇವೆ
ಕಂಡ ಕನಸುಗಳೇಕೋ ಕರಗಿಬಿಟ್ಟವು ನನ್ನ ನಿನ್ನ ನಡುವೆ

ಅದೆಷ್ಟೋ ಅಕ್ಷರಗಳು ತ್ರಿನೇತ್ರಜನೆದೆಯಿಂದ ಹಾಡಾದವು
ಪುಟಗಳೇಕೋ ಖಾಲಿಯಾಗೇ ಉಳಿದವು ನನ್ನ ನಿನ್ನ ನಡುವೆ
**** ***** ***** ****
✍🏼.. ತ್ರಿನೇತ್ರಜ

 ಶಿವಕುಮಾರ. ಹಿರೇಮಠ.


ಫರ್ದ್ ಗಳು
 *ಕತ್ತಲು-ಬೆಳಕು*

[04/02, 9:46 a.m

ಬೆಳಕು ಮೂಡಲು ಜೀವ ಜಗವೆಲ್ಲ ದುಡಿವುದು
ಕತ್ತಲಾಗದಿದ್ದೊಡೆ ವಿಶ್ರಾಂತಿ ಎಂತು ಸಿಗುವುದು
            *************
ಬೆಳಕೆಂದರದರಲ್ಲಿ ಜ್ಞಾನದ ಹೋಲಿಕೆಯ ಕಾಣ
ಅಜ್ಞಾನವಿರದಿದ್ದೊಡೆ ಜ್ಞಾನಕೆಂತು ಬೆಲೆ ಜಾಣಾ
          **************
ಬಾಳಬೇಕೆಂದರೆ ಬೆಳಕು ಬೇಕೆಬೇಕಯ್ಯ ಬಾಳಿಗೆ
ಬೆಳೆಯಬೇಕೆಂದರೆ ಅಜ್ಞಾನವನಟ್ಟಿರಯ್ಯ ಅಡವಿಗೆ
       ****************
ಕತ್ತಲವನೋಡಿಸಲು ಬೇಕು ಬೆಳಕಿಗೊಂದು ಶಕ್ತಿ
ಶಕ್ತಿರಹಿತ ಅಂಧಕಾರ ಶಾಶ್ವತವದು ಇನ್ನೆಲ್ಲಿ ಮುಕ್ತಿ
      ****************
ಜೀವ ಅಶಾಶ್ವತವಿದು ಆತ್ಮಜ್ಯೊತಿಯ ಮೇಲೆ ನಿರ್ಭರ
ಆ ಶಕ್ತಿಯ ಬಳಸು ಮಸ್ತಿಷ್ಕಕೆ ಜ್ಞಾನ ಬೆಳಗಲಿ ನಿರಂತರ
       *****************
✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ.






        *ಗಜಲ್-೧೦*
ಭೋಜನಕೆ ನಿಜ ಸ್ವಾದವೆಲ್ಲಿದೆ ಉಪ್ಪಿಲ್ಲದ ಮೇಲೆ.
ಸಂಬಂಧಗಳಿಗೆ ಬೆಲೆ ಎಲ್ಲಿದೆ ಪ್ರೀತಿಯಿಲ್ಲದ ಮೇಲೆ.

ಕಾನನಕೆ ಹಸಿರಿದ್ದರೆ ಸೊಬಗು ಸವಿಯಲು ಚಂದ.
ಕಾಡು ಬೆಂಗಾಡಾಗದೆ ಆ ವರುಣ ಮುನಿದ ಮೇಲೆ.

ನಭದಿ ಪೂರ್ಣ ಚಂದ್ರ ನಗಲು ಅಲೆಗಳಿಗಾನಂದ.
ಕಡಲಿಗೆಲ್ಲಿಯ ಕಳೆಯು ಪೌರ್ಣಿಮೆ ಕಳೆದ ಮೇಲೆ.

ರಾಗಕೆ ಸ್ವರ, ಸ್ವರಕೆ ಪದ ಬೆರೆತರದೆ ಮಧುರ ಗಾನ.
ಬಾಳಗೀತೆಗೆ ಲಯವೆಲ್ಲಿದೆ ತಾಳವೆ ತಪ್ಪಿದ ಮೇಲೆ.

ಜೋಡಿರೆಕ್ಕೆ ಜೊತೆಗೂಡಿರೆ ಹಕ್ಕಿಗೆ ಹಾರುವ ಸಂಭ್ರಮ.
ತ್ರಿನೇತ್ರಜನಿಗೆ ಏನಿದ್ದರೇನಂತೆ ಒಲವು ಮುರಿದ ಮೇಲೆ.
          -----------------
   ✍🏼  ತ್ರಿನೇತ್ರಜ್

ಶಿವಕುಮಾರ.ಹಿರೇಮಠ

ಗಜಲ್ --೧೧

ಹುಟ್ಟಿನಿಂದ ಸಾವಿನವರೆಗೂ ನರಜನ್ಮದ ಮೆರವಣಿಗೆ.
ಗರ್ಭದಿಂದ ಭೂಗರ್ಭದವರೆಗೆ ಜೀವನದ ಮೆರವಣಿಗೆ.

ಬದುಕು ಪೂರ ಹೊಸ ಹೊಸ ಅನುಭವಗಳ ಚಿತ್ತಾರ
ಬದುಕಿನ ಜಾತ್ರೆಯಲ್ಲಿ ಹಲವು ಭಾವದ ಮೆರವಣಿಗೆ.

ಬಾಲ್ಯದ ಚಿಗುರಿನಲ್ಲಿ ಗೆಳೆಯರ ಒಡನಾಡಿ ಸಂಬ್ರಮ.
ಕಲಿಕೆಯ ಸಾದನೆಗೆ ನೂರಾರು ಪಾಠದ ಮೆರವಣಿಗೆ.

ಯೌವ್ವನದ ದಿನಗಳಲ್ಲಿ ಬಯಕೆಗಳು ಅರಳಿ ಕನವರಿಕೆ.
ಹರೆಯ ಮಾಸಿದರೂ ಕನಸುಗಳು ಮಾಸದ ಮೆರವಣಿಗೆ.

ದೇಹ ಮಾಗಿದರೂ ಕೋಲು ಹಿಡಿದರೂ ಮನಸು ಬಾಗದು.
ತ್ರಿನೇತ್ರಜನ ಮನದಲ್ಲಿ ಸಾಗಿದೆ ನೆನಪಿನಂದದ ಮೆರವಣಿಗೆ.

ತ್ರಿನೇತ್ರಜ
ಶಿವಕುಮಾರ ಹಿರೇಮಠ.

Saturday, 10 February 2018

ಗಜಲ್-೯  (೭ ದ್ವಿಪದಿ)

ಈ ಜಗವೆಲ್ಲ ನಾದಮಯ
ಜೀವನವೆಲ್ಲ ನಾದಮಯ

ಕೋಗಿಲೆ ಹಾಡಿತು ಸುಸ್ವರ
ಈ ಬನವೆಲ್ಲ ನಾದಮಯ

ಶಿವ ಢಮರು ನುಡಿಸಿದನು
ಕೈಲಾಸವೆಲ್ಲ ನಾದಮಯ

ನದಿಯುಲಿದಿದೆ ಮಂಜುಳ
ಆ ತೀರವೆಲ್ಲ ನಾದಮಯ

ಕೃಷ್ಣನು ಕೊಳಲೂದಿದನು
ಮಥುರವೆಲ್ಲ ನಾದಮಯ

ಕಂದನು ನಕ್ಕನು ಕಿಲಕಿಲ
ಮನೆಯೆಲ್ಲ ನಾದಮಯ

ತ್ರಿನೇತ್ರಜನಿಗೆ ನೀನೊಲಿದೆ
ನಮ್ಮಬಾಳೆಲ್ಲ ನಾದಮಯ

✍🏼 ತ್ರಿನೇತ್ರಜ.
ಗಜಲ್ -೮

ಭುವನೇಶ್ವರಿಯೆ ನಿನ್ನ ಕಂದ ನಾ ನೀನಿತ್ತ ನುಡಿಗಳಿಂದ ಪೂಜಿಸುವೆ
ನೀನಿತ್ತಿಹ ಅಕ್ಷರಗಳನೆ ಪೋಣಿಸಿ ಪದ ಮಾಲೆಗಳಿಂದ ಪೂಜಿಸುವೆ.

ಇದೋ ಕೃಷ್ಣೆ, ತುಂಗೆ, ಪ್ರಭೆಯರು; ಆ ಕಾಳಿ, ನೇತ್ರಾ ,ಕಾವೇರಿಯರು
ನಿನ್ನೊಳಾಡುತ ಹರಿವುದ ಕಂಡು ತಣಿದು ಕಾವ್ಯಗಳಿಂದ ಪೂಜಿಸುವೆ.

ಅದ್ಬುತ ಕಥನವು ನಿನ್ನ ಇತಿಹಾಸ,ಕಲೆಯ ವೈಭವಗಳ ನೆಲೆವೀಡು.
ವೀರರ, ಅರಸರ, ಸ್ವತಂತ್ರ ಕಲಿಗಳ ಸಾಹಸ ಕಥೆಗಳಿಂದ ಪೂಜಿಸುವೆ

ಗುರುಗಳ,ವಚನಕಾರರ,ದಾಸರು, ಕವಿ ಶ್ರೇಷ್ಠರು ಸೇವೆಗೈದಿಹರಿಲ್ಲಿ.
ಪುಣ್ಯಕ್ಷೇತ್ರಗಳ ಪಾವನೆ ನಿನ್ನನು ಸುಲೇಖನಗಳಿಂದ ಪೂಜಿಸುವೆ.

ಬಹುಜನುಮಗಳ ಪುಣ್ಯದ ಫಲವು ಈ ನಾಡಿನ ಮಗನಾಗಿ ಜನಿಸಿರುವೆ.
ನುಡಿಸೇವೆಯಲಿ ತ್ರಿನೇತ್ರಜನ ನೀ ಹರಸೆಂದು ಭಕ್ತಿಯಿಂದ ಪೂಜಿಸುವೆ.

✍🏼 ತ್ರಿನೇತ್ರಜ


ಶ್ರೀ ಶಿವಕುಮಾರ. ಹಿರೇಮಠ.
ಬಾಗಲಕೋಟೆ.
shivakumarh13 @gmail.com

 *ಗಜಲ್-೭* 
ಎರಡು ಗಿಳಿಗಳ ಮುದ್ದಾಟಕಂಡು ನಾ ಕಳೆದುಹೋದೆ ಗೆಳತಿ.
ಮನಪರದೆಯ ಮೇಲಿಂದು ಅರೆಕ್ಷಣ ನೀ ಸುಳಿದುಹೋದೆ ಗೆಳತಿ.

ಅಂದು ಹರೆಯದ ಹೃದಯಂಗಳದಲ್ಲಿ ನಿನಗಿಷ್ಟ ಬಂದಂತೆ
ಬಣ್ಣ ಬಣ್ಣದ ರಂಗೋಲಿಯ ಚಿತ್ತಾರ ಬಿಡಿಸಿಹೋದೆ ಗೆಳತಿ.

ಹೊತ್ತು ಮುಳುಗುವರೆಗೂ ಜತನದಿಂದ ಇರಿಸಬೇಕೆಂದಿದ್ದೆ,
ಮಧ್ಯಾಹ್ನವೇ ಚಂಚಲತೆಯ ನೀರನ್ನು ಸುರಿದುಹೋದೆ ಗೆಳತಿ.

ನೆನಪಿನ ಬುತ್ತಿಯ ಬಿಚ್ಚಿ ನಿನಗಾಗಿ ನಾ ಕಾಯುತ್ತಲೇ ಇದ್ದೆ,
ಮರಳಿ ಮತ್ತೆ ನನ್ನೊಡನೆ ಊಟವನ್ನು ಮಾಡದೆಹೋದೆ ಗೆಳತಿ.

ವಸಂತಗಳುರುಳಿ,ಕೋಗಿಲೆಗಳೆಷ್ಟೋ ಹಾಡಿಹೋದರೂ,
ತ್ರಿನೇತ್ರಜನೆದೆಯಲ್ಲಿ ಅಪಸ್ವರವಾಗಿ ಉಳಿದುಹೋದೆ ಗೆಳತಿ.
.... ... ... ... ... .... .... ...
..✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.

Friday, 9 February 2018



 *ಗಝಲ್--೬*

ಹಸಿ ಇಲ್ಲ, ಹಸಿರಿಲ್ಲ ಮನಸು ಮರಳುಗಾಡಿನಂತಾಗಿದೆ ದ್ಯಾಮ.
ಎಷ್ಟೇ ಹೀರಿದರೂ ಮದಿರೆ ಏಕೋ ಮತ್ತೇರಿಸದಂತಾಗಿದೆ ದ್ಯಾಮ.

ಚಿಕ್ಕಂದಿನಿಂದ ಜೊತೆಗೂಡಿ  ಆಡಿ, ಹಾಡಿ ನಲಿದಾಡಿದ ಗೆಳೆಯನವನು.
ಅವಳಿಗಾಗಿ ಅವನ ಕಳೆದುಕೊಂಡ ಮನ ಅನಾಥವಾದಂತಾಗಿದೆ ದ್ಯಾಮ.

ಮನದಲ್ಲಿ ಬಲು ಪ್ರೀತಿಯಿಂದ ಪೂಜಿಸಿ ಆರಾಧಿಸುತ್ತಿದ್ದೆ ನಾ ಅವಳನು.
ಅವನ ಮೋಹಿಸಿಯಾಳೆಂದು ಸಂಶಯಿಸಿದ್ದು ಚೂರಿ ಇರಿದಂತಾಗಿದೆ ದ್ಯಾಮ.

ಅವನಿಂದ ಮನ ಹಗುರ,ಅವಳಿಂದ ಹೃದಯ ಹಗುರ;ಎರಡೂ ಈಗ ಭಾರ.
ನನಗೆ ಬದುಕೇ ಬೆಂಗಾಡಾಗಿ, ಬಯಸಿ ಸಾವನು ಕರೆವಂತಾಗಿದೆ ದ್ಯಾಮ.

ನನ್ನ-ಅವಳ ಬೆಸೆಯಲು ಆತ,ಅವನ ಮರಳಿಸಲವಳು, ದೂರಾದರೆ?
ಇವರಿಬ್ಬರೂ ತ್ರಿನೇತ್ರಜನಿಗಿಂತ ಅದೋ, ಬಲು ಎತ್ತರದಿ ನಿಂತಂತಾಗಿದೆ ದ್ಯಾಮ.
----------------
..✍ ತ್ರಿನೇತ್ರಜ.


      ಗಝಲ್--೪
ಅಚ್ಚಳಿಯದೆ ಉಳಿದ ನೆನಪಿನಂಗಳಕೆ ಮರಳಬೇಕೆಂಬ ಆಸೆ.
ಮಾಧ್ಯಮಗಳ ಗದ್ದಲವಿಲ್ಲದ ಕಾಲಕ್ಕೆ ಮತ್ತೆ ಸೇರಬೇಕೆಂಬ ಆಸೆ.

ಕಾಡ ಕಾಲದಾರಿಯಲಿ ಗೆಳೆಯರೊಂದಿಗೆ ಶಾಲೆಗ್ಹೋಗುವಾಗ ಆನಂದ
ಮರದ ಮರೆಯಿಂದ ಕೇಳಿದ್ದ ಕೋಗಿಲೆ ಇಂಚರ ಕೇಳಬೇಕೆಂಬ ಆಸೆ.

ಮುಂಜಾವ ಮಳೆಯ ಚಿಟಪಟ ನಾದ
ನೀಡುತ್ತಿತ್ತು ಆಹ್ಲಾದ
ಮನೆ ಹಿಂದಿನ ಮರದಲಿ ಹಕ್ಕಿಗಳ ಚಿಲಿಪಿಲಿ
ಕಿವಿತುಂಬಬೇಕೆಂಬ ಆಸೆ.

ಪಕ್ಕದೂರಿನ ಜಾತ್ರೆಗೆ ಹೋಗಿ ಕೇಳಿದ್ದ ಗದ್ದಲ ಇಂದಿಗೂ ರಿಂಗಣ
ನೆರೆಮನೆ ಕಂದನ ಕೈಗೆ ಆಟಿಕೆ ಇಟ್ಟಾಗ ಹಾಕಿದ ಕೇಕೆ ಕೇಳಬೇಕೆಂಬ ಆಸೆ.

ಬಾನುಲಿಯಲಿ ತೇಲಿಬರುತ್ತಿದ್ದ ಹಾಡುಗಳು,ಕೃಷಿರಂಗದ ಚಂದ
ಯುವವಾಣಿಯ ಆರಂಭಿಕ  ಸಂಗೀತ ಈಗೊಮ್ಮೆ ಆಲಿಸಬೇಕೆಂಬ ಆಸೆ

ಕಾಲ ಉರುಳಿ ಗಡ್ಡ-ಮೀಸೆಯು ನೆರೆತಿದೆ,ತ್ರಿನೇತ್ರಜನಿಗೆ
 ಬಾಲ್ಯಕೆ ಮರಳಿ ಜೋಗುಳ ಕೇಳುತ್ತ ನಿದ್ರೆಗೆ ಜಾರಬೇಕೆಂಬ ಆಸೆ.
........ ....... ...... ....... .....
✍..ತ್ರಿನೇತ್ರಜ
ಶಿವಕುಮಾರ. ಹಿರೇಮಠ.
ಗಝಲ್-೫
ಯೌವನದ ಫಲ ಮಾಗಿರಲು ಸವಿಯಲದರ ರಸವ ಮನ ಬಯಸಿದೆ.
ಕಣ್ಣಂಚಲಿ ಒಪ್ಪಿಗೆ ಸೂಚಿಸುವ ನಿನ್ನ ಕುಡಿನೋಟವ ಮನ ಬಯಸಿದೆ.

ಮಾಗಿಯ ಚಳಿ ಬೆಳದಿಂಗಳೊಡನೆ ಬೆರೆತು
ಮನದಿ ವಿರಹ ಮಂಜುಗಟ್ಟಿ ನಿಂತಿದೆ|
ಉಸಿರ ಬಿಸಿ ಕಾವ್ಯಕೆ ಪಲ್ಲವಿಯಂತೆ
ಕೈಬಳೆ ನಾದವ ಮನ ಬಯಸಿದೆ||

ನೀರವತೆಯಲಲ್ಲೆಲ್ಲೋ ಅರಳಿಹ ಪಾರಿಜಾತದ ಘಮವಿಲ್ಲಿಗೂ ಧಾವಿಸಿದೆ|
ತಾಳವಿಕ್ಕುತಿಹ ಕೀಟದ ಸದ್ದಿನಂತೆ ನಿನ್ನ ಕಾಲ್ಗೆಜ್ಜೆ ಸಪ್ಪಳವ ಮನ ಬಯಸಿದೆ||

ನಿನ್ನೆದೆಯ ಮದ್ದಳೆಗಳ ತಕಧಿಮಿ ನಾದಕೆ ನನ್ನ ಹೃದಯವೀಣೆ ಜೊತೆಗೂಡಿದೆ|
ಮುಲುಗುವ ನಿನ್ನಧರ ಉಲಿವ ಸ್ವರಗಳ ಹಿತವ ಮನ ಬಯಸಿದೆ||

ನಿತ್ಯ ಜಂಜಾಟಕೆ ನಲುಗಿಹ ತ್ರಿನೇತ್ರಜನಿಗೆ ಜಗವ ಮರೆಯಬೇಕಿದೆ|
ನಿನ್ನೊಳಗೆ ಕಳೆದುಹೋಗಲು ಮಿಲನದ ಮಹೋತ್ಸವ ಮನ ಬಯಸಿದೆ||
■■■■■■■■■■■■■■■■■■■■■■
✍..ತ್ರಿನೇತ್ರಜ.

          ಗಝಲ್--೩
ಕಾಯ್ದ ನೊರೆಹಾಲಂತೆ ಉಕ್ಕಿದೆನ್ನ ಭಾವನೆಗಳ ಗೀತೆ ನನ್ನ ಕವನ.
ಹದವಾಗಿ, ಮೌನದೊಳು ಮಾತಾದ ಭಾವಪರವಶತೆ ನನ್ನ ಕವನ.

ರಮ್ಯ ನಿಸರ್ಗದೊಳು ನನ್ನೆ ನಾ ಮೈಮರೆತಾಗ
ಕಲ್ಪನಾಲಹರಿಯಾಗಿ ಉದ್ಭವಿಸೊ ಭವ್ಯತೆ ನನ್ನ ಕವನ.

ಪದಪ್ರಾಸಗಳು ಕಚಗುಳಿಯಿಟ್ಟು ಉತ್ಸಾಹಿಸಲು
ಮೈದಳೆದು ನಿಂತ ಭಾವಗಳ ನಾವಿನ್ಯತೆ ನನ್ನ ಕವನ.

ವಿರಹ, ಉದ್ವೇಗ,ಕೋಪತಾಪಗಳ ಹೊಯ್ದಾಟಕೆ
ಮಿಂಚಂತೆ ಪ್ರಕಟಗೊಳ್ಳುವ ರೂಪನಿಖರತೆ ನನ್ನ ಕವನ.

ಪ್ರೇಮಸಲ್ಲಾಪ, ಪರಿಣಯದಾಲಾಪ, ಹಾಸ್ಯ ಲಾಸ್ಯ
ನಿರಂತರ ತುಂಬಿ ಸೂಸುವ ನವ ರಸಿಕತೆ ನನ್ನ ಕವನ.

ಪ್ರೋತ್ಸಾಹದ ಕರತಾಡನ, ಅಭಿನಂದನೆ, ಗೌರವದಾತೆ
ತ್ರಿನೇತ್ರಜನಿಗೆ ಖ್ಯಾತಿಯ ತಂದಿತ್ತ ಭಾಗ್ಯದಾತೆ ನನ್ನ ಕವನ.
...   ...   ...   ...   ...   ...   ... ...
✍..ತ್ರಿನೇತ್ರಜ.

ಶಿವಕುಮಾರ.ಹಿರೇಮಠ.

        ಗಝಲ್-- ೧
ಅಂದು ಪ್ರೀತಿ ಮಳೆಸುರಿಸಿ ಮನದಿ ಹಸಿರನು ತುಂಬಿದೆ.
ಇಂದು ವಿರಹ ವ್ಯಥೆಯಿಂದ ಕಣ್ಣಲಿ ನೀರನು ತುಂಬಿದೆ.

ನಿನ್ನ ಕಣ್ಣಲೇ ನನ್ನ ನಾ ನೊಡಿ ಆಗ ನಲಿದಾಡುತ್ತಿದ್ದೆ
ನೀ ಹೋದಮೇಲೆ ಕಣ್ಣಿದ್ದರೂ ಬಾಳಲಿ ಕತ್ತಲೆಯನು ತುಂಬಿದೆ

ನನ್ನೆದೆಯ ಹೊಲದಲಿ ಪ್ರೇಮದ ಬೀಜಗಳ
ಬಿತ್ತುತ್ತಿದ್ದೆ.
ನೀ ದೂರವಾಗಲು ನನ್ನೆದೆಯ ತುಂಬೆಲ್ಲಾ
ಬರಡನು ತುಂಬಿದೆ

ಕಾಲ್ಗೆಜ್ಜೆ, ಬಳೆ ನಾದಗಳಲಿ ನನ್ನ ನೀ ಕುಣಿಸುತ್ತಿದ್ದವಳು.
ಈಗ ಸದ್ದಿಲ್ಲ, ಸಡಗರವಿಲ್ಲ ಮನದಿ ನೀರಸ ಮೌನವನು ತುಂಬಿದೆ

ಸೌಂದರ್ಯದ ಅಮಲೇರಿಸಿ ನಶೆಯ ತುಂಬುತ್ತಿದ್ದವಳು.
ತ್ರಿನೇತ್ರಜನ ಬದುಕಲೀಗ ನಿನ್ನ ಸ್ಥಾನಕೆ ಸಾರಾಯಿನು ತುಂಬಿದೆ
... ..... ..... .....
✍...ತ್ರಿನೇತ್ರಜ

ಶಿವಕುಮಾರ.ಹಿರೇಮಠ.

       ಗಝಲ್--೨
ವಸಂತನಂತೆ ಹಸಿರಿತ್ತ ಹರೆಯವ ಮತ್ತೆ ಹೊಂದಲು ಬಯಸುವೆ.
ನವೋಲ್ಲಾಸದ ಸವಿಗಾಲವ ಮತ್ತೆ ಪಡೆಯಲು ಬಯಸುವೆ.

ಮೊದಲ ಕುಡಿ ನೋಟಕೆ ನಾನಂದು ನಿನಗೆ ಸೋತೆ.
ಇಂದುಕೂಡ ಅಂದಿನಂತೆ ನಾ ಸೋಲಲು ಬಯಸುವೆ.

ನೀನಿತ್ತ ಮೊದಲ ಚುಂಬನ, ಮತ್ತೇರಿಸಿದಾ ಘಳಿಗೆ.
ಈಗ ಪುನಃ ಒದಗಿದರೆ ಅನುಭವಿಸಲು ಬಯಸುವೆ.

ಪಿಸುಮಾತಿಗೆ ನಸುನಾಚುತಿದ್ದೆ  ಕೆನ್ನೆಯ ಕೆಂಪಗಾಗಿಸಿ.
ಶೃಂಗಾರದ ಮೊದಲುಗಳ ಮತ್ತೆ ಕಾಣಲು ಬಯಸುವೆ.

ಗೋಧೂಳಿಗೆ ಬಾಗಿಲಲೆ ಕಾಯುತಿದ್ದೆ ನನಗಾಗಿ.
ದಣಿವಾರಿಸುವಾ ಆ ಸೊಬಗನು ಪುನಃ ನೋಡಲು ಬಯಸುವೆ.

ತ್ರಿನೇತ್ರಜನ ಬಾಳಿನಲ್ಲಿ ಹುಣ್ಣಿಮೆಯಂಥ ಕಾಲವದು.
ಮತ್ತೊಮ್ಮೆ ಮರಳಿಸೆಂದು ಮನಸಾರೆ ಬೇಡಲು ಬಯಸುವೆ.
..... ...... ..... ..... ..... ....
✍...ತ್ರಿನೇತ್ರಜ.
         
    ಶಿವಕುಮಾರ. ಹಿರೇಮಠ.