Saturday, 22 September 2018

        ಗಜ಼ಲ್-೨೮
ಪ್ರೀತಿ ಇಲ್ಲದ ಕೆಂಗಣ್ಗಳಲ್ಲಿ ನನ್ನ ಬಿಂಬವ ಕಂಡೆ ನಾ
ಪ್ರೀತಿ ತುಂಬಿದ ನೋಟ ಹರಿಸಿ ಸವಿಭಾವ ಕಂಡೆ ನಾ

ದ್ವೇಷವೆಂಬುದು ಅಂಟುಜಾಡ್ಯ ಪಸರಿಸುತಲೆ ಸಾಗದೇ
ಉಪಷಮನಕೆ ಪ್ರೀತಿ ಮದ್ದು ನೀಡುತ ಗೆಲುವ ಕಂಡೆ ನಾ

ಪಟ್ಟವದು ದಮನಕಲ್ಲವೊ ಮೂಡಿ ಮಾಸುವ ಮಳೆಬಿಲ್ಲು
ಅಳಿಸಲಾರದ ಆಸ್ತಿ ವಿದ್ಯೆಯೋ ಅದರ ಬಲವ ಕಂಡೆ ನಾ

ಅನತಿ ದೂರದ ಅವಸಾನಕೆ ಹಣತೆ ಹೆಚ್ಚು ಉರಿವುದೋ
ತಾಳದವನಿಗೆ ಬಾಳಿಲ್ಲವೋ ತಾಳುತ ನಗುವ ಕಂಡೆ ನಾ

ಸಗ್ಗದಲೇಕೆ ಜನಮನದಲೂ
ಅಮೃತವಿದೆ ತ್ರಿನೇತ್ರಜ
ಬಿಚ್ಚಿ ಬಡಿಸದ ಅಲ್ಪರ ನಡೆಯೊಳು ಅಹಂಭಾವ ಕಂಡೆ ನಾ.

        .................................
*ತ್ರಿನೇತ್ರಜ್*

ಶಿವಕುಮಾರ ಹಿರೇಮಠ.


Sunday, 15 April 2018



ಗಝಲ್-- ೨೭
     [05/04, 8:02 p.m.]

ಎನ್ನೆದೆಯ ಹಸಿರು ತಿಳಿಗೊಳದಲ್ಲರಳಿದ ಚಿತ್ತಾರ ನೀನು|
ಅಂದದಿಂದೆನ್ನ ಮನಸೂರೆಗೊಂಡ ಮೋಹಕ ಮಂದಾರ ನೀನು||

ಶುಭ್ರವಾಗಿಹ ನೈದಿಲೆಯಂದದಿ ಅಂದು ನೀರೊಳು ಕಂಡೆ |
ಶ್ವೇತವರ್ಣೆ ನಾನಂದು ಕಂಡ ಅಪ್ಸರೆಯ ಸಾಕಾರಚಿತ್ರ ನೀನು||

ನೀರುಂಗುರಗಳ ಮೂಡಿಸುತ ಜಲದೊಳಾಡಿದ ಕನ್ಯಾ ರೂಪಸಿ |
ಎನ್ನ ಹೃದಯದೊಳು ಸಿಹಿ ಕ್ಷೋಭೆ ತಂದಿತ್ತ ಶೃಂಗಾರವೆ ನೀನು||

ಕಣ್ಣಿನಲ್ಲೇ ಅಚ್ಚಾಗಿದೆ ಆ ನಿನ್ನ ತನ್ಮಯತೆಯ ಭಾವಭಂಗಿ|
ಮೊಗವ ತೋರದೆ ಮನಗೆದ್ದ ಮಧುರ ವೈಯ್ಯಾರ ನೀನು||

ಪಚ್ಚೆಗೊಳದ ಹಂಸಿನಿಯಾ ಹೇಗೆ ಮರೆಯುವ ಈ ತ್ರಿನೇತ್ರಜ|
ವರ್ಣಪಟವಾಗಿ ಮೂಡಿನಿಂದಿಹ ಕಲಾ ಸಂಕರವಾದೆ ನೀನು||
    ..ತ್ರಿನೇತ್ರಜ..

Sunday, 1 April 2018

*ಗಝಲ್-೨೬*

ಜಗದ ಸೊಗಸು ನೋಡುತ ನೋಡುತ ಸಂಜೆಯಾಗಿತ್ತು|
ಕಡಲ ಮಡಿಲಿಗೆ ರವಿ ಜಾರುತ ಜಾರುತ  ಸಂಜೆಯಾಗಿತ್ತು||

ಹಗಲು ನಂದಲು ಜೋಡಿಮರಗಳ ಆನಂದ ಕರಗಿ ಕಪ್ಪಿಟ್ಟಿತ್ತು|
ಬೆಸುಗೆಯ ಸಂಭ್ರಮ ಸವಿಯುತ ಸವಿಯುತ ಸಂಜೆಯಾಗಿತ್ತು||

ಸಾಗರದನ್ನವ ಹೆಕ್ಕಲು ಇನ್ನೂ ಬಲೆ ಬೀಸೋ ಧಾವಂತವಿತ್ತು|
ಅಲೆಗಳ ಜೊತೆಯಲಿ ಸೆಣಸುತ ಸೆಣಸುತ ಸಂಜೆಯಾಗಿತ್ತು||

ದಿನವೆಲ್ಲ ಮರೆತಿದ್ದ ಮಧುಪಾತ್ರೆಯ ನೆನಪು ಈಗ ಮತ್ತೆ ಕಾಡಿತ್ತು|
ಬಾಳಿಗಾಗಿ ನಾಳೆಗಾಗಿ ದುಡಿಯುತ ದುಡಿಯುತ ಸಂಜೆಯಾಗಿತ್ತು||

ಬದಲಾಗುವ ಜಗದ ರಂಗು ಇಟ್ಟ ನಂಬಿಕೆಯನ್ನೆ ಹುಸಿಯಾಗಿಸಿತ್ತು|
ಬದುಕಿನುದ್ದಕು ತ್ರಿನೇತ್ರಜನ ಹುಡುಕುತ ಹುಡುಕುತ ಸಂಜೆಯಾಗಿತ್ತು||

✍🏼  ತ್ರಿನೇತ್ರಜ

ಶಿವಕುಮಾರ. ಹಿರೇಮಠ.
ಗಝಲ್ --೨೫

ಕುದ್ದ ಬೇಸರವು ಕಣ್ಣಿಂದುಕ್ಕುವ ಮುನ್ನ ನೀ ಬಂದು ನೋಡಬಹುದಿತ್ತು
ಒಲವಿನ ಬೆಸುಗೆ ಒಡೆಯುವ ಮುನ್ನ ನೀ ಬಂದು ನೋಡಬಹುದಿತ್ತು

ಸುಳಿಗೆ ಸಿಕ್ಕ ನಾವಿನಂತೆ ನನ್ನ ಮನವು ನಿನ್ನ ಸುತ್ತಲೇ ಸುತ್ತುತ್ತಲಿತ್ತು
ನಿರಾಸೆಯೊಳಗೆ ಮುಳುಗಿಸುವ ಮುನ್ನ ನೀ ಬಂದು ನೋಡಬಹುದಿತ್ತು

ಗಾಳಕ್ಕೆ ಸಿಕ್ಕ ಗಂಗಾಫಲದಂತೆ ನಿನ್ನ ಕಪಟ ಮೋಹಕೆ ನಾ ಸಿಲಿಕಿದ್ದೆನೆ?
ದಿಟವೆಂದು ಜಗವೆಲ್ಲ ನಗುವ ಮುನ್ನ ನೀ ಬಂದು ನೋಡಬಹುದಿತ್ತು

ತಿಳಿಗೊಳದಂತಹ ಹೃದಯ ಸರೋವರದಲಿ ನಿನ್ನ ಬಿಂಬ ಮಾತ್ರವಿತ್ತು
ತಳವ ಕಲಕಿ ಕೆಸರಾಗಿಸುವ ಮುನ್ನ ನೀ ಬಂದು ನೋಡಬಹುದಿತ್ತು

ಮತ್ತೆ ಚಿಗುರುವಾಸೆ ಬಿಟ್ಟು ಕೊರಗುವ ಕೊರಡಾಗಿದ್ದ ತ್ರಿನೇತ್ರಜ
ಇವಳು ಜಲವೀಯುವ ಮುನ್ನ ನೀ ಬಂದು ನೋಡಬಹುದಿತ್ತು
:::::::::::::::::::::::::::''::::::::::::::
✍🏼 ತ್ರಿನೇತ್ರಜ

ಶಿವಕುಮಾರ ಹಿರೇಮಠ
ಗಝಲ್-೨೪
ಭೂರಿ ಸಭೆಯೊಳು ಕರ್ಣ ಭಂಗಂಬಡುತಿರಲು ಮಾತೃ ಮಮತೆಗೆ ಏನಾಗಿತ್ತು
ಮೈಗಂಟಿದ್ದ ಕವಚವ ಕಿತ್ತು ದಾನವಾಗಿ ಪಡೆದಾಗ ಶ್ರೇಷ್ಠ ಪೊಗರಿಗೆ ಏನಾಗಿತ್ತು
ಅಂಧತ್ವವ ಮುಂದುಮಾಡಿ ಜೇಷ್ಠನನು ಸಿಂಹಾಸನಕ್ಕೆ ಕಡೆಗಣಿಸಿದರು
ಪಾಂಡು ಮೃತ್ಯಾನಂತರ ರಾಜ್ಯವ ಮನ್ನಡೆಸಿದಾಗ ಆಳ್ವಿಕೆಗೆ ಏನಾಗಿತ್ತು
ಹೆತ್ತ ಕಂದನಿವನೆಂದು ಗೊತ್ತಾದಾಗಲೂ ತುಟಿ ಬಿಚ್ಚಲು ಮನಸಾಗಲಿಲ್ಲ
ದತ್ತು ಪಡೆದಾದರೂ ತಪ್ತಮನಕೆ ತೃಪ್ತಿ ನೀಡದ ಹೆತ್ತ ಕರುಳಿಗೆ ಏನಾಗಿತ್ತು
ರಣಕಂಕಣಕಟ್ಟಿ ಶಸ್ತ್ರ ಢಾಳಿಸುವಾಗ ಹುಟ್ಟ ಗುಟ್ಟನುಸುರಿದ್ದು ಸಂಚು
ಪಟ್ಟದಾಸೆ ತೋರಿ ಮಿತ್ರನ ತೊರೆಯೆಂದಾಗ ವಿವೇಚನೆಗೆ ಏನಾಗಿತ್ತು
ಜಲ ತೊರೆದ ಬಂಗಡೆಯಂತಾಗಿಸಿ ರಾಧೇಯನ ಡೇರೆಯೊಳಿಕ್ಕಿದ ಗಂಗಾಪುತ್ರ
ಯುದ್ಧವ ಗೆಲ್ಲಲಾಗದ ಎಲ್ಲ ಬಲ್ಲ ಮುತ್ತಾತನ ಕ್ಷಾತ್ರ ತೇಜಸ್ಸಿಗೆ ಏನಾಗಿತ್ತು
ಅನುಜೆಯ ಸೌಭಾಗ್ಯಕ್ಕೆ ತೊಟ್ಟ ಬಾಣ ಮರಳಿ ತೊಡದ ವಚನ ಪಡೆದಾಯ್ತು
ಹೂತ ಚಕ್ರವನೆತ್ತುತ್ತಿದ್ದ ನಿಶಸ್ತ್ರನ ಕತ್ತಿಗೆ ಶರವಿಕ್ಕಿದಾಗ ನೀತಿಗೆ ಏನಾಗಿತ್ತು
ಧರ್ಮದ ಪಥದಲೆ ನಡೆದು ಧರ್ಮ ರಕ್ಷಣೆಯಗೈಯಲಾಗದಲ್ಲಾ ತ್ರಿನೇತ್ರಜ
ನ್ಯಾಯೋಚಿತ ಹಕ್ಕಿಗೆ ಹೋರಾಡಿ ಮಡಿದ ಸುಯೋಧನನ ಅರ್ಹತೆಗೆ ಏನಾಗಿತ್ತು
.... ..... ..... .... ..... .... ...
✍ ತ್ರಿನೇತ್ರಜ್
ಶಿವಕುಮಾರ ಹಿರೇಮಠ

Wednesday, 21 March 2018

ಗಝಲ್-೨೩

ಬಾಡದ ಹೂಗಳ ತಂದು ನಿನ್ನ ಮುಡಿಗೇರಿಸುವುದು ನನ್ನ ಕನಸಾಗಿತ್ತು ಘಾತಕಿ
ಮೋಡಗಳ ಎಳೆದು ತಂದು ನಿನಗುಡಿಸುವುದು ನನ್ನ ಕನಸಾಗಿತ್ತು ಘಾತಕಿ

ಕನಸುಗಳ ಕೊಂದು ಚಿತೆಗೇರಿಸಿ ಕ್ರೂರ ಮಗುಳ್ನಗೆಯಿಡನೆ ಮರೆಯಾದೆಯಲ್ಲ
ರೋಮಿಯೋ,ಷಹಜಹಾನರ ಮೀರಿಸಬೇಕೆಂಬುದು ನನ್ನ ಕನಸಾಗಿತ್ತು ಘಾತಕಿ

ಹೃದಯವನ್ನು ಮಾಂಸದ ಮುದ್ದೆ ಎಂದು ಭಾವನೆಗಳ ಮಾನ ತೆಗೆದೆಯಲ್ಲ
ಪ್ರೇಮಪುಟದೊಳು ನಮ್ಮದೊಂದು ಭಾವಗೀತೆ ಬರೆವುದು ನನ್ನ ಕನಸಾಗಿತ್ತು ಘಾತಕಿ

ನಿನ್ನ ಬಯಸಿದ ತಪ್ಪಿಗೆ ‌ನನ್ನ ಬದುಕು ಸೂತ್ರ ಹರಿದ ಗಾಳಿಪಟವಾಯಿತು
ಒಲವಿನಂಬರದಲಿ ನಿನ್ನ ಕೈಹಿಡಿದು ತೇಲುವುದು ನನ್ನ ಕನಸಾಗಿತ್ತು ಘಾತಕಿ

ತ್ರಿನೇತ್ರಜನ ಕಣ್ಣಿಂದ ನೆತ್ತರನೇ ಸುರಿಸಿ ಕಣ್ಣೆತ್ತಿ ನೋಡದೆ ಹೊರಟು ಹೋದೆಯಲ್ಲ
ರೆಪ್ಪೆಯಾಗಿ ನಿನ್ನನ್ನು ಕಣ್ಣಲ್ಲಿ ಜತನಮಾಡುವುದು ನನ್ನ ಕನಸಾಗಿತ್ತು ಘಾತಕಿ
********************
✍🏼 ತ್ರಿನೇತ್ರಜ್

 ಶಿವಕುಮಾರ ಹಿರೇಮಠ

Tuesday, 20 March 2018

ಗಝಲ್-೨೨

ನರಮನ್ಸಾ ಶಾನೆ ಬೆಳ್ಕೊಂಡ್ಬಿಟ್ಟೆ ಪಾಪಿ , ಹದ್ಮೀರಿದ್ ನಿನ್ ದುಷ್ಟ್ಬುದ್ದಿಗೆಂದೂ ಕೊನೆಯಿಲ್ಲ
ಪರಪಂಚಾನೆ ಹಾಳಾಗ್ಹೊ ದ್ರು ಯೊಚ್ನೆ ಗೀಚ್ನೆ ಯಾವ್ದುಇಲ್ಲ ,ನಿನ್ ಹುಚ್ಚಾಟಕ್ಕೆಂದೂ ಕೊನೆಯಿಲ್ಲ

ಹುಯ್ಯೋ ಮಳೆನೀರೆಲ್ಲಾ ಸೇರ್ಕೊಂಡ ತಗ್ಗಿಗ್ಹರಿಯೋದ ನಿಯಮ,ಇನ್ನೇನ್ ದಿನ್ನೆ ಹತ್ತತ್ತಾ.
ಕೆರೆಗಳ್ನುಂಗಿ ಮನೆ ಕಟ್ಕೊಂಡೆ, ನೀರ್ನುಗ್ಗಿದ್ಕೆ ಬಾಯ್ ಬಡ್ಕಳ್ಳೊ ನಾಟ್ಕಕ್ಕೆಂದೂ ಕೊನೆಯಿಲ್ಲ.

ಮರಗಳ್ನೆಲ್ಲ ಕಡ್ದಹಾಕ್ಬಿಟ್ಟೆ,ಕಾಡಿದ್ರೇನೆ ಮಳೆ ಸುರಿಯೋದು, ಇನ್ನೇನ್ ನಿನ್ ಮುಸುಡಿ ನೋಡ್ಕೊಂಡಾ
ಭೂಮಿ ಬಗ್ದು ನೀರ್ ತೆಗ್ದಾಯ್ತು ,ಕುಡಿಯೋ ನೀರ್ಗೆ ಬಡದಾಡ್ಕೊಳ್ಳೊ ದುರ್ಗತಿಗೆಂದೂ ಕೊನೆಯಿಲ್ಲ

ಕಷ್ಟಪಟ್ಟು ಸ್ವತಂತ್ರ ತಂದಿದ್ ಈ ದೇಶ ಬೇಳಸ್ಬೇಕಂತಾ, ಇನ್ನೇನ್ ಬಡವರ್ನ ಸುಲಿಯೋಕಂತಾನಾ.
ಬದುಕೊಕ್ ಲಂಚ ಸತ್ತ್ರೂ ಲಂಚ ,ದೇವ್ರ ದರ್ಷ್ನನೂ ಕಷ್ಟಾಗೋಯ್ತು ಬ್ರಷ್ಟಾಚಾರಕೆಂದೂ ಕೊನೆಯಿಲ್ಲ

ತ್ರಿನೇತ್ರಜ ಇಷ್ಟೆಲ್ಲ ಅಕ್ಷ್ರ ಗೀಚೋದು ವಸಿ ಎಚ್ರ ಮೂಡ್ಲಿ ಅಂತಾ, ಇನ್ನೆನ್ ಕೆಲ್ಸ ಇಲ್ಲಂತಾನಾ.
ಇರೊಳೊಬ್ಳೆ ಭೂಮ್ತಾಯಿ, ನಾಶಕ್ಮೊದ್ಲೆ ಎಚ್ಚೆತ್ಗೊಂಡ್ರೆ ನನ್ ಸಂತೋಷಕ್ಕೆಂದೂ ಕೊನೆಯಿಲ್ಲ.
----------------------
✍🏼 ತ್ರಿನೇತ್ರಜ್

 ಶಿವಕುಮಾರ. ಹಿರೇಮಠ.
ಗಝಲ್- ೨೧
(ಕಾಫಿಯಾನಾ)

ಎದೆಯಲ್ಲಿ ಕೆಂಡಗಳ ರಾಶಿ ಉರಿದರೂ ನಗುನಗುತಲಿ ಸಹಿಸಿಕೊಂಡೆ
ಪ್ರೀತಿ ಹುಡುಕುವ ಭರದಲ್ಲಿ ಮುಗ್ದ ಮನಸ್ಸಿನ ಶಾಂತಿ ಕಳೆದುಕೊಂಡೆ

ಹೃದಯದ ತುಂಬ ಚಿತ್ರ ಬಿಡಿಸಿ ಅಳಿಸಲಾರದೆ ಹಾಗೇ ಹೋದಳು
ಬೇಸರಿಸದೆ ಆಗಾಗ ನೆನಪಿನ ಕಳೇಬರದೊಡನೆ ಮಾತಾಡಿಕೊಂಡೆ

ಒಲವಿನ ಫಲ ಪಕ್ವವಾಗುವ ಮುನ್ನವೇ ಚಂದದ ಚೂರಿಯಿಟ್ಟಳು
ಮದ್ದ ನೀಡುವವರಾರಿಲ್ಲದೆ ನನಗೆ ನಾನೇ ಉಪ್ಪು ಸವರಿಕೊಂಡೆ

ವಿರಹಕ್ಕಿರುವ ಕವಲು ನೂರಾದರೂ ಎಲ್ಲದಕೂ ಹಾಳು ಮನಸೇ ಬೇರು
ಕತ್ತರಿಸಿದರೂ ಚಿಗುರೊಡೆವವು, ಬೇರನು ಕೀಳಲಾಗದೆಂದರಿತುಕೊಂಡೆ

ತ್ರಿನೇತ್ರಜನ ಎದೆಯ ಗುಡಿಸಲಲಿ ಬೆಚ್ಚಗಿರದೆ ನಿರ್ಲಕ್ಷಿಸಿ ಹೋದಳು
ಹೃದಯ ಸಿರಿತನವ ಅರಿಯದ ಅವಳ ಪೆದ್ದುತನಕೆ ಮರುಗಿಕೊಂಡೆ
...... ..... ...... ...... ....... ........ ........
✍🏼 ತ್ರಿನೇತ್ರಜ್.
19/03, 3:50 p.m
 (ಶಿವಕುಮಾರ ಹಿರೇಮಠ)


 *ಗಝಲ್ ೨೦*

ಎಷ್ಟು ಸಾರೆ ಯತ್ನಿಸಿದರು ಅವಳ ಅರ್ಥೈಸಲಾಗದೆ ನಾ ಸೋತೆ
ಎಂಥ ಶಕ್ತಿ ಇದ್ದರೂ ಅವಳ ಅಂತಃಶಕ್ತಿಯರಿಯದೆ ನಾ ಸೋತೆ

ಮುಸುರೆ ತಿಕ್ಕಿ ಬಟ್ಟೆ ತೊಳೆವ ಆ ಹಸ್ತಗಳಿಗೆ ಬೇಸರವೆಂಬುದಿಲ್ಲ
ಒರಟು ಕೈಗಳ ನೋಡದರೂ ಅವುಗಳ ಶ್ರಮವರಿಯದೆ ನಾ ಸೋತೆ

ಎದೆಯಲೆದ್ದ ಬಿಸಿಗೆ ದೇಹವದು ಕಾದು ಬೆಂಡಾಗಿ ಪ್ರಕೃತಿಯಾದಳು
ಜೀವತೆಗೆವ ನೋವಲ್ಲೂ ಜನ್ಮವೀವ ತಾಳ್ಮೆಯರಿಯದೆ ನಾ ಸೋತೆ

ಕಟ್ಟಿದ ಮೂರು ಬಂಧದಲ್ಲಿ ಬಂದ ಅಪರಿಚಿತ ಸಂಬಂಧ ಬೆಸೆದಳು
ಅವಳು ಎಂದರೆ ಬರಿ ಮಾನುಷಿಯಲ್ಲ ಎಂಬುದನರಿಯದೆ ನಾ ಸೋತೆ

ಎಲ್ಲವನ್ನೂ ತನ್ನೋಳಗಿರಿಸಿಕೊಂಡವಳೆದಿರು ತ್ರಿನೇತ್ರಜ ಎನೇನೂ ಅಲ್ಲ
ಅಂದವ ಮಾತ್ರ ಅಳೆದಳೆದು ಚಂದದ ಹೃದಯವರಿಯದೇ ನಾ ಸೋತೆ

✍🏼 ತ್ರಿನೇತ್ರಜ್
[10/03, 10:02 p.m.]
 ಶಿವಕುಮಾರ. ಹಿರೇಮಠ

Saturday, 3 March 2018

*ಗಝಲ್-- ೧೯*

ಜೀವನದ ಪ್ರತಿದಿನದ ಪಾಠಗಳಿಗೆ ಮನ ತೆರೆದ ಬಾಗಿಲಾಗಿರಲಿ|
ತ್ರಿನೇತ್ರಜ ಹಂಚಿಹ ಹದುಳದರಿವಿಗೆ ಮನ ತೆರೆದ ಬಾಗಿಲಾಗಿರಲಿ||

ಬದುಕು ಆಳ ತಿಳಿಯದ ಸಾಗರವಲ್ಲದೆ ಮಿತಿಯುಳ್ಳ ಬಾವಿಯಲ್ಲ|
ಅವಿರಿವರು ಕಂಡ ಅನುಭವಗಳಿಗೆ ಮನ ತೆರೆದ ಬಾಗಿಲಾಗಿರಲಿ||

ಎಲ್ಲ ಬಲ್ಲೆನೆಂಬುವ ತಪ್ಪು ಕಲ್ಪನೆಯು ನೇಣ ಕುಣಿಕೆಯೋ ಕಲಿಕೆಗೆ|
ದಿಕ್ಕು ದಿಕ್ಕಿನಿಂದ ದಕ್ಕುವ ಜ್ಞಾನಗಳಿಗೆ ಮನ ತೆರೆದ ಬಾಗಿಲಾಗಿರಲಿ||

ನೋವನು ಉಚಿತ ನೀಡೋ ಮಾಯೆಯ ಸಂತೆಯೋ ಈ ಬದುಕು|
ದೀನ ಅಬಲರ ನೋವಿನ ತುಣುಕಳಿಗೆ ಮನ ತೆರೆದ ಬಾಗಿಲಾಗಿರಲಿ||

ದ್ವೇಷದ ಹೊಗೆಯಲೇ ಬೆಂಕಿಹಚ್ಚಲು ನೂರ್ಕಾಲ ಸಮಯವುಳಿದಿಲ್ಲ|
ನೆಮ್ಮದಿಗಾಗಿ ಮೂರ್ಕಾಲವೂ ಕ್ಷಮೆಗೆ ಮನ ತೆರೆದ ಬಾಗಿಲಾಗಿರಲಿ||
*******************
✍🏼 ತ್ರಿನೇತ್ರಜ್

ಶಿವಕುಮಾರ ಹಿರೇಮಠ

Tuesday, 27 February 2018

ಗಜಲ್ ೧೮
[25/02, 2:52 p.m.]
( ಶ್ರೀದೇವಿಗೆ ನುಡಿನಮನ)
    

ಬಾಲಿವುಡ್ ಬಣ್ಣದ ಗಗನ ಬೆಳಗಿದ ಚಾಂದಿನಿ ಚಲೀ ಗಯಿ
ರಸಿಕರ ಮನ ಘಾಯಲ್ ಗೊಳಿಸಿದ ಚಾಂದಿನಿ ಚಲೀ ಗಯಿ

ಇಂದ್ರಲೊಕ ಸುಂದರಿಯರ ನಾಚಿಸಿದ ರೂಪ ಕಿ ರಾಣಿ ಅವಳು
ಬೆಳ್ಳಿಪರದೆಯಲಿ ಅಮರ ಅಚ್ಚುಳಿಸಿದ ಚಾಂದಿನಿ ಚಲೀ ಗಯಿ

ನಟನೆಯಿಂದ ಕ್ಷಣ ಕ್ಷಣಂ ರೋಮಾಂಚನ ತುಂಬುತ್ತಿದ್ದ ಕಲಾವಿದೆ
ಸಿನಿಪ್ರಿಯರಿಗೆ ಮರೆಯದ ಸದ್ಮಾ ನೀಡಿದ ಚಾಂದಿನಿ ಚಲೀ ಗಯಿ

ಖುದಾಗವಾ ಹೈ ಅತಿಲೋಕ ಸುಂದರಿಯ ಅನುಪಮ ಸಾಧನೆಗೆ
ಪದ್ಮಶ್ರೀ ಪಡೆದು ಮಿ.ಇಂಡಿಯಾ ಬಾನಿಂದ ಚಾಂದಿನಿ ಚಲೀ ಗಯಿ

ಇಂಗ್ಲೀಷ್ ವಿಂಗ್ಲೀಷ್ ನಿಂದ ಮತ್ತೆ ಬೆಳಗಿದ ಮಾಮ್ ಮರೆಯಾದಳು
ಎಲ್ಲರಂತೆ ತ್ರಿನೇತ್ರಜನಿಗೆ ದುಃಖ ನೀಡಿ ಅಂದದ  ಚಾಂದಿನಿ ಚಲೀ ಗಯಿ

✍🏼.. ತ್ರಿನೇತ್ರಜ್

 ಶಿವಕುಮಾರ. ಹಿರೇಮಠ.

Saturday, 24 February 2018

ಗಜಲ್  ೧೭

ಬದುಕು ಕ್ಷಣಿಕ ಕಾಮನಬಿಲ್ಲು ಕತ್ತಲಾದಾಗ ಬಣ್ಣಗಳೆಲ್ಲ ಮಾಯ
ಎಲ್ಲ ಮುಗಿದು ಹೋದಮೇಲೆ ಮಣ್ಣಾಗುವೆ ಭೋಗವೆಲ್ಲ ಮಾಯ

ಮೊಟ್ಟೆ ಇಟ್ಟು ಮರಿಗಳ ಬೆಳೆಸಲು ಗೂಡನು ಕಟ್ಟುವವು ಹಕ್ಕಿಗಳು
ಪುಕ್ಕ ಬಲಿತು ಮರಿ ಹಾರಿ ಹೋದಮೇಲೆ ಕಂಡ ಕನಸೆಲ್ಲ ಮಾಯ

ಬಯಕೆಗಳ ಬೀಜಬಿತ್ತಿ ಪ್ರೀತಿಯ ಹೊಲದೊಳು ಹಸಿ ಹಸಿರ ಬೆಳೆದೆ
ಅಕಾಲಿಕದಲಿ ಅತಿವೃಷ್ಟಿ ಸುರಿದು ಹೋದಮೇಲೆ ಫಲವೆಲ್ಲ ಮಾಯ

ಭೋರ್ಗರೆದು ಹರಿಯುತ್ತಿದ್ದ ಹರೆಯಕೆ ಕಟ್ಟೆಕಟ್ಟಿ ಕೂಡಿಕ್ಕಬಯಸಿದೆ
ವಯದ ತಾಪಕೆ ಭಾವನೆಗಳು ಬತ್ತಿ ಹೋದಮೇಲೆ ಆಸೆಯೆಲ್ಲ ಮಾಯ

ಮಿಥ್ಯ ಮೃತ್ಯುಲೋಕದೊಳು ತ್ರಿನೇತ್ರಜ ಅಮರನೆಂದು ಮೆರೆದಾಯ್ತು
ವ್ಯಾಮೂಹವು ಅಳಿದು ಹೋದಮೇಲೆ ತುಂಬಿದ್ದ ಗರ್ವವೆಲ್ಲ ಮಾಯ

✍🏼  ತ್ರಿನೇತ್ರಜ್

 ಶಿವಕುಮಾರ. ಹಿರೇಮಠ.

Sunday, 18 February 2018

ಗಝಲ್ ೧೬
[17/02, 9:36 p.m.]

ಒಲವಿಗಿಂತ ನಿ‌ನಗೈಸಿರಿಯೆ ಇಷ್ಟವೆಂಬುದು ಗೊತ್ತಿರಲಿಲ್ಲ
ಹಣದಾಸೆಗೆ ನೀ ಎದೆ ಒಡೆಯುವೆಯೆಂದು ಗೊತ್ತಾಗಲಿಲ್ಲ

ಹೃದಯ ಗುಡಿಯಲಿ ನಿನ್ನಿರಿಸಿ ಪೂಜಿಸುತ್ತಿದ್ದೆ ಪ್ರೀತಿಯಿಂದ
ನೀನೊಂದು ಕ್ಷುದ್ರ ದೇವತೆ ಎಂಬುದ ನಾ ಅರಿತಿರಲಿಲ್ಲ

ನನ್ನ ಮನದ ಮನೆಯ ಅಂದ ಹೆಚ್ಚಿಸುವ ಪುಷ್ಪವೆಂದುಕೊಂಡೆ
ಮುಡಿಗೇರಿಸದೆ ಕಡೆಗಾಣಿಸುವ ಹೂವು ನೀನೆಂದು ಭಾವಿಸಲಿಲ್ಲ

ನಿನ್ನ ನಗೆಬಾಣದ ನೋಟಕ್ಕೆ ನಾನದೆಷ್ಟು ಹಾತೊರೆಯುತ್ತಿದ್ದೆನಲ್ಲ
ತುದಿಯಲ್ಲಿ ಕಾರ್ಕೂಟಕ ವಿಷವಂಟಿರುವುದು ತಿಳಿಯಲೇ ಇಲ್ಲ

ಹೃದಯವಂತರಿಗೇ ಮೋಸವಾಗಲು ಯಾರಿಟ್ಟಿಹ ಶಾಪವೋ ಎನೋ?
ಎದೆ ಉರಿವ ಅಗ್ಗಿಷ್ಟಿಕೆಯಾಗಿ ಹೃದಯವು ಕಪ್ಪಿಟ್ಟ ಇದ್ದಿಲಂತಾಯ್ತಲ್ಲ

ಜಗವನ್ನೆ ಎದುರಿಸುವ ಹುಮ್ಮಸ್ಸಿನ ಹರೆಯದೆದೆಗಾರಿಕೆ ನನ್ನಲ್ಲಿತ್ತು
ಪ್ರೀತಿ ಕೊಲ್ಲುವ ಪ್ರೇತದ ಸಂಗಮಾಡಿ ನಲುಗುವೆನೆಂದೆಣಿಸಿರಲಿಲ್ಲ

ಜೀವಕೊಟ್ಟವರ ಮರೆತು ಗಮನ ನಿನ್ನಲಿರಿಸಿ ಗಮ್ಯವನೇ ಮರೆತೆ
ಗೋರಿ ಸೇರಿದರೂ ನೀನಿತ್ತ ನೋವ ತ್ರಿನೇತ್ರಜ ಮರೆಯುವಂತಿಲ್ಲ

✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ.
ಗಝಲ್ - ೧೫

ಜಗದೊಳಾರಿಗೂ ಇರದ ಅಭೂತಪೂರ್ವ ಮೈಮಾಟ ನಿನ್ನದು
ನಿನ್ನಯ ಸೊಬಗನು ಆರಾಧಿಸುವ ಅಪರಿಮಿತ ಭಾಗ್ಯವು ನನ್ನದು

ಫಲಪುಷ್ಪಯುಕ್ತ ನವರಸಭರಿತ ಸಮೃದ್ಧ ಸಿರಿತೋಟ ನಿನ್ನದು
ಮೈ ಮರೆತು ವಿಹರಿಸುತ ಪುಳಕಗೊಳ್ಳುವ ಕಾಯಕವು ನನ್ನದು

ತಾರೆಗಳಿಂದಲಂಕೃತಗೊಂಡ ಆಗಸದಂತಹ ಮನಃಪಟ ನಿನ್ನದು
ಚಂದಿರನಂದದಲಿ ನಿನ್ನಯ ಮನಕೆ ತಂಪೆರೆವ ಯೋಗವು ನನ್ನದು

ಪಿಕದಿಂಚರವನೇ ನಾಚಿಸಿಬಿಡುವಂತಹ ಸುಮಧುರ ಕಂಠ ನಿನ್ನದು
ಕನಸುಗಳ ಗರಿಬಿಚ್ಚಿ ನವಿಲಿನಂದದಲಿ ನರ್ತಿಸುವ ಭಾವವು ನನ್ನದು

ಗುಲಾಬಿದಳಗಳಲಿ ಮುತ್ತುಗಳ ತೋರುವ ನಗೆ ಚೆಲ್ಲಾಟ ನಿನ್ನದು
ಎವೆಯಿಕ್ಕದೆ ಕಣ್ತುಂಬ ನಿನ್ನಂದವ ಸೆರೆ ಹಿಡಿವ ಕೌಶಲವು ನನ್ನದು

ತ್ರಿನೇತ್ರಜ ತನ್ನದೆಲ್ಲವನೂ ನಿನಗೇ ಸೋತ, ಎಂತಹ ಮಾಟ ನಿನ್ನದು!
ಎಲ್ಲ ನಿನ್ನದಾಗಲಿ ಚೆಲುವೆ,ಸಾಕು ನಿನ್ನ ಹೃದಯದ ಒಲವೆಲ್ಲವು ನನ್ನದು

✍🏼  ತ್ರಿನೇತ್ರಜ

 ಶಿವಕುಮಾರ. ಹಿರೇಮಠ.


Wednesday, 14 February 2018

ಗಝಲ್-14

[13/02, 12:58 p.m.]
ಶಿಷ್ಟಾಚಾರದ ದೀಪ್ತಿಯಾಗಿ ಜಗಕೆ ಮಾದರಿಯಾಗಿದ್ದೆ ಭಾರತ
ಭ್ರಷ್ಟಾಚಾರದ ನೃತ್ಯಕ್ಕೆ ಮಣಿದು ಸ್ವಾರ್ಥಿಗಳ ಸೊತ್ತಾದೆ ಭಾರತ

ಪರರ ದಬ್ಬಾಳಿಕೆಯಲ್ಲೂ ನಿನ್ನತನವ ಮಾರಲಿಲ್ಲ ಬಲವಾಗಿದ್ದೆ
ಸ್ವತಂತ್ರದ ಕಳೆಯಲ್ಲೂ ಸುಸಂಸ್ಕೃತಿ ಮಾಯವಾಗುತಿದೆ ಭಾರತ

ಅಭಿವೃದ್ಧಿಯ ಓಟ,ರಾಜಕೀಯದ ಹುಚ್ಚಾಟ,ಕಾಳಧನದ ಚೆಲ್ಲಾಟ
ಎಪ್ಪತ್ತಾದರೂ ದೀನ ದಲಿತರು ಬಲಿತರಾಗದ ಕ್ಷಾಮವಿದೆ ಭಾರತ

ಮನೆಯವರೊಟ್ಟಿಗೆ ಸಡಗರದಿಂದಾಚರಿಸೋ ಹಬ್ಬಗಳನಿತ್ತೆ
ಹೆತ್ತವರ ಕಣ್ತಪ್ಪಿಸಿ ಪ್ರೇಮಿಗಳ ದಿನ ಆಚರಿಸಲಾಗುತ್ತಿದೆ ಭಾರತ

ಅಂತಃಕರಣ ಮನುಷ್ಯತ್ವ ನೀತಿ ನಿಯಮಗಳ ಸ್ಪೂರ್ತಿಯಾಗಿದ್ದೆ
ನಿರ್ಲಜ್ಜ ಕಾಮಪಿಪಾಸುಗಳ ಧರ್ಮಾಂಧರ ಸಂತೆಯಾದೆ ಭಾರತ

ಬಸವ ಮೋಹನ ಭೀಮರು ಬೆಳಗಿ ದಾರಿತೋರಿ ಅಸ್ತರಾದರು
ದಾರಿಬಿಟ್ಟವರಿಗೆ ಚಿತ್ರ ಪ್ರತಿಮೆಗಳೇ ಬಂಡವಾಳವಾಗಿದೆ ಭಾರತ

ಗರುಭ್ಯೋ ನಮಃ ಎಂದು ತ್ರಿನೇತ್ರಜ ಜ್ಞಾನಕ್ಕೆ ಗಮನ ತೋರಿದ್ದ
ಅಧಿಕಾರಕ್ಕೆ ಡೊಗ್ಗುಸಲಾಮಿಕ್ಕುವವರ ಸೋಗಿಗೆ ಪೆಚ್ಚಾದೆ ಭಾರತ

✍🏼 ತ್ರಿನೇತ್ರಜ

 ಶಿವಕುಮಾರ‌. ಹಿರೇಮಠ.